ಕಟ್ಟುವೆವೆಮ್ಮಯ ಭಾರತವ
ಒಡಲೊಳು ತುಂಬಿದ ವಿಷವನು ತೆಗೆಯಲು ಸೆರಗಲಿ ಅವಿತ ದ್ರೋಹಿಯ ಬಡಿಯಲು ಯುವ ಪಡೆಯೊಂದು ಸಾಗಿರಲು ದೂರದಿ ನಿಂತು, ಮನೆಯಲಿ ಕುಳಿತು ಕಟ್ಟುವೆವೆಮ್ಮಯ ಭಾರತವ|| ದೂರದ ಶಿಖರದಿ ಹುಟ್ಟಿದ ಮಾರಿಗೆ ಮೋಹ ಜನಗಳ ಸಾವಿನ ಸಾರಿಗೆ ಬಂದಿದೆ ದಾಟಿ ನಮ್ಮಯ ಹಾದಿಗೆ ಕೊರೊನ ತಂದಿದೆ ಜನರನು ಬೀದಿಗೆ ದೂರದಿ ನಿಂತು, ಮನೆಯಲಿ ಕುಳಿತು ಕಟ್ಟುವೆವೆಮ್ಮಯ ಭಾರತವ|| ಗಡಿಯಲಿ ನಿಂತ ಸೈನಿಕ ನೊಂದ ಮಾಸ್ಕ್ ಒಳಗಡೆ ವೈದ್ಯನು ಬೆಂದ ಕ್ರೂರಿಯ ಆಟ ಸಾಧುವ ಕೊಂದ ಸಿಕ್ಕಿತೇ ನಿಮಗೆ ಆನಂದ? ದೂರದಿ ನಿಂತು, ಮನೆಯಲಿ ಕುಳಿತು ಕಟ್ಟುವೆವೆಮ್ಮಯ ಭಾರತವ|| ಮನೆಯಲಿ ಕೂರಲು ಬೇಸರ ತಂದಿದೆ ದೂರದಿ ನಿಲ್ಲಲು ಪ್ರೀತಿಯು ಕೊರಗಿದೆ ದೂರದಿ ನಿಲ್ಲದೆ, ಮನೆಯಲಿ ಕೂರದೆ ಬರುವರ ಬಲಿಗೆ ಕೊರೊನವು ಕಾದಿದೆ ದೂರದಿ ನಿಂತು, ಮನೆಯಲಿ ಕುಳಿತು ಕಟ್ಟುವೆವೆಮ್ಮಯ ಭಾರತವ|| ಚಪ್ಪಾಳೆ ತಟ್ಟಿ, ದೀಪವ ಹಚ್ಚಿ ವೈದ್ಯಯೋಧರ ಕಾರ್ಯವ ಮೆಚ್ಚಿ ಬರಲಿ ಗುಣಮುಖರ ಸಂಖ್ಯೆಯು ಹೆಚ್ಚಿ ತೊಲಗಲಿ ಬೇಗ ಕೊರೊನ ಕೊಚ್ಚಿ ದೂರದಿ ನಿಂತು, ಮನೆಯಲಿ ಕುಳಿತು ಕಟ್ಟುವೆವೆಮ್ಮಯ ಭಾರತವ|| - ಗಗನ್ ಅಬ್ಬಿನಹೊಳೆ